ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

ಅಂತೂ ಸಾಹಿತಿಯಾಗಿಬಿಟ್ರಲ್ಲಾ……!

ಇದೊಂದು ರೀತಿಯ ನೆನಪಿನ ಬುತ್ತಿಯನ್ನು ಉಣಬಡಿಸುವ ಪ್ರಯತ್ನ ನನ್ನದು. ಇದರಲ್ಲಿ ಖುಷಿ, ಮಜಾ ಮತ್ತು ತಿಳಿದುಕೊಳ್ಳುವಂತದ್ದು ಏನಾದರೂ ಇದ್ದರೆ, ಓದ್ರಿ, ನಾನು ೫ ನೇ ಕ್ಲಾಸ್‌ನಲ್ಲಿದ್ದಾಗ ನಮ್ಮಮ್ಮನ ತವರ್‍ಮನೆ ಕೆ.ಬೂದಿಹಾಳದಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ನಾನೇ ದೊಡ್ಡ ವಿದ್ಯಾರ್ಥಿಯಾದ್ದರಿಂದ ವಾರ್ಷಿಕ ದಿನಾಚರಣೆ ಮತ್ತು ವಿಶೇಷ ದಿನಗಳಲ್ಲಿ ಏಕಾಂಕ ನಾಟಕಗಳನ್ನು ಅಲ್ಲಿಯ ಮಾಸ್ತರು ನನ್ನಿಂದ ಮಾಡಸ್ತಿದ್ರು. ಎಲ್ರಗಿಂತ ನಾನೇ ದೊಡ್ಡ ಹುಡುಗನಾಗಿದ್ರಿಂದ ಖಳನಾಯಕನ ಪಾತ್ರಕ್ಕೆ ನನ್ನನ್ನೇ ಆಯ್ಕೆ ಮಾಡುತ್ತಿದ್ರು.

ಹೀಗಾಗಿ ಅಲ್ಲಿಯ ಮಾಸ್ತರಿಗೆ ನನ್ನ ನೆನಪು ಪಕ್ಕಾ ಇತ್ತು. ಜೊತೆಗೆ ನಾನು ಕನ್ನಡದ ಪದಗಳನ್ನು ನಿಧಾನವಾಗಿ ಮೇಲು ದನಿಯಲ್ಲಿ ಸ್ಪಷ್ಟವಾಗಿ ಹೇಳುವ ಅಭ್ಯಾಸವು ಸಹಿತ ನನ್ನನ್ನು ಅವರ ನೆನಪಿನಲ್ಲಿ ಉಳಿಯುವಂತೆ ಮಾಡಿತ್ತು. ಅಂತೂ ಆ ವರ್ಷ ಪಾಸಾಗಿ, ತಾಳಿಕೋಟೆಗೆ ಬಂದು, ಮುಂದಿನ ವಿದ್ಯಾಭ್ಯಾಸವನ್ನು ಮಾಡಿದೆ. ನನಗೆ ನೆನಪಿದ್ದ ಪ್ರಕಾರ ೭ ನೇ ಕ್ಲಾಸ್‌ನಲ್ಲಿದ್ದಾಗ, ನಮಗೆ ಶಾಲೆಯ ಮಾಸ್ತರ್‌ಗಳು ಮೈಸೂರು, ಬೆಂಗಳೂರು, ಶ್ರವಣಬೆಳಗೊಳ, ಬೇಲೂರು, ಹಳೇಬೀಡು ಪ್ರವಾಸವನ್ನಿಟ್ಟುಕೊಂಡಿದ್ದರು. ಅಂತೂ ಪ್ರವಾಸಕ್ಕೆ ಬುತ್ತಿ ಕಟ್ಟಿಕೊಂಡು, ಹೊರಟುಬಿಟ್ಟೆವು. ಸಣ್ಣಪುಟ್ಟ ಖರ್ಚಿಗೆಂದು ಮನೆಯಲ್ಲಿ ಒಂದು ರೂಪಾಯಿಯನ್ನು ಕೊಟ್ಟಿದ್ರು. (ಅಂದಿನ ಒಂದು ರೂಪಾಯಿ ಇಂದು ನೂರು ರೂಪಾಯಿಗಿಂತಲೂ ಹೆಚ್ಚೇ ಆಗಬಹುದು). ಹಳ್ಳಿ ಹುಡುಗರಾಗಿದ್ದರಿಂದ ನಾವು ರೈಲು ಬಂಡಿ ಯನ್ನು ನೋಡಿರಲಿಲ್ಲ. ಅದಕ್ಕೆ ನಮ್ಮ ಕಡೆ ಹಳ್ಳಿಯ ಜನ “ಅಗ್ಗಿನಗಾಡಿ” ಎಂದು ಕರೆಯುತ್ತಿದ್ದರು. ಅಂದರೆ, ಅಗ್ನಿಯ ಗಾಡಿ ಎಂದರ್ಥ. ಅಂದ್ರೆ, ಕಲ್ಲಿಜ್ಜಿಲನ್ನು ಹಾಕಿ ಓಡಿಸುವ ಗಾಡಿ ಎಂದೇ ತಿಳಿದುಕೊಳ್ಳಬೇಕು. ಅಂತೂ ರೈಲು ಗಾಡಿ ಯಲ್ಲಿ ಒಂದು ಹಗಲು, ಒಂದು ರಾತ್ರಿ ಬೆಳಗಾಗುವವರೆಗೆ ಬೆಂಗಳೂರು ತಲುಪಿದೆವು. ಅಲ್ಲಿಂದ ಯಾವುದೋ ಒಂದು ಶಾಲೆಗೆ ಹೋಗಿ ಬೆಳಗಿನ ಕಾರ್‍ಯ ಮುಗಿಸಿ, ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸಿಟಿ ಬಸ್ ಹತ್ತಿದೆವು. ಸರಾಸರಿ ೪೦ ಕಿ.ಮೀ ವೇಗದಲ್ಲಿ ಬಸ್ಸು ಹೊರಟಿತು. ವಿಧಾನಸೌಧ, ಬೆಂಗಳೂರಿನ ಅರಮನೆ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮುಂದೆ ಬಸ್ಸು ಹೋಗುತ್ತಿರುವಾಗ ನಮ್ಮ ಮಾಸ್ತರ್‌ಗಳು ಸಮಯದ ಅಭಾವದಿಂದಲೋ ಏನೋ ಕಿಟಕಿ ಕಡೆ ತೋರಿಸಿ “ಏಯ್ ಹುಡುಗ್ರಾ..! ಅಲ್ಲಿ ನೋಡ್ರೋ ವಿಧಾನಸೌಧ, ಅದೇ ಮಂತ್ರಿ ಮಹೋದಯರು ಇರುವ ಜಾಗ. ಕೆಂಗಲ್ ಹನುಮಂತರಾಯ ಕಟ್ಟಿಸಿರೋದು. ಮುಂದೆ ಅಲ್ಲಿ ನೋಡ್ರ್‍ಓ.. ಕಬ್ಬನ್ ಪಾರ್ಕ್, ಗೊತಾಯ್ತಾ? ಮುಂದೆ ಹೋದೆವು. ಇದೇ ನೋಡ್ರೀ ಲಾಲ್‌ಬಾಗ್, ಇದನ್ನ ಟಿಪ್ಪು ಸುಲ್ತಾನ್ ಗಿಡಹಾಕಿದ್ದು. ಹೀಗೆ ಕಿಟಕಿಯಿಂದಲೇ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುತ್ತಾ ಮೈಸೂರಿಗೆ ಬಂದು ಮೈಸೂರಿನಲ್ಲಿ ಅರಮನೆಗಳನ್ನು ಹೀಗೆ ತೋರಿಸಿದರು. ಅಂದಿನ ದಿನ ಕ್ಯಾಮರಾ ಬಳಕೆ ಇರಲಿಲ್ಲ. ಕೆಲವು ಕಡೆ ಸ್ಟಿಲ್ ಫೋಟೋಗಳನ್ನು ಕೊಂಡ್ವಿ. ನಂತರ ಬೇಲೂರಿಗೆ ಬಂದ್ವಿ.. ಬೇಲೂರಿನಲ್ಲಿ ಚನ್ನಕೇಶವ ದೇವಸ್ಥಾನ, ಹಳೇಬೀಡಿನಲ್ಲಿ ಹೊಯ್ಸಳೇಶ್ವರ ದೇವಸ್ಥಾನ, ಶ್ರಾವಣ ಬೆಳಗೊಳದ ಬೆಟ್ಟದ ಮೇಲೆ ಗೊಮ್ಮಟೇಶ್ವರನ ವಿಗ್ರಹ, ಎಲ್ಲಾ ಎರಡು ದಿನದೊಳಗೆ ನೋಡ್ಕೊಂಡು ಊರಿಗೆ ಬಂದ್ವಿ.

ಆದರೆ ನನಗೆ ದಾವಣಗೆರೆ ದಾಟಿದ ಮೇಲೆ ದಕ್ಷಿಣ ಕರ್ನಾಟಕದ ಜನ ಮಾತನಾಡುವ ಭಾಷೆ, ಬಹಳ ಸುಶ್ರಾವ್ಯವಾಗಿ, ಸುಲಿದ ಬಾಳೆಹಣ್ಣು ಹಾಗೆ ಸುಲಲಿತವಾಗಿ ಸುಂದರವಾಗಿರುವುದನ್ನು ನನ್ನ ಕಂಡಿದ್ದೆ, ಅನುಭವಿಸಿದ್ದೆ, ಮತ್ತು ಮಾತಾಡಲು ಪ್ರಯತ್ನಿಸಿದ್ದೆ. ಮೊದಲೇ ನಾನು ಆಗಲೇ ಅದು, ಇದು ಗೀಚೋದು, ಪದ ಕಟ್ಟಿ ಹೇಳೋ ಹವ್ಯಾಸ ಬೆಳೆಸಿಕೊಂಡಿದ್ದೆ. ಸುಂದರವಾದ ಮೈಸೂರು ಭಾಷೆಯಲ್ಲಿ ಒಂದು ಸಣ್ಣ ಪುಸ್ತಕವನ್ನೇಕೆ ಬರೆಯಬಾರದು ಎಂದವನೇ ನೋಟ್‌ಬುಕ್ ತೆಗೆದುಕೊಂಡೆ. ಬನ್ನಿ, ಹೋಗಿ, ಸ್ವಾಮಿ, ಹಣ, ಬೆಳಗಿನ ಜಾವ, ಮಗು, ಜನ, ಇಂತಹ ವರಟಲ್ಲದ ಸುಂದರವಾದ ಪದಗಳನ್ನು ಬಳಸಿ, ಮೈಸೂರು ಶೈಲಿಯಲ್ಲಿ ಅಂತೂ ಇಂತು ಒಂದು ೫೦ ಪುಟದ “ಮೈಸೂರು ಮಲ್ಲಿಗೆ” ಅನ್ನುವ ಪುಸ್ತಕವನ್ನು ಬರೆದು ಬಿಟ್ಟಿದ್ದೆ. ಈ ಪುಸ್ತಕ ಬರೆಯುವಾಗ ನಾನು ೮ ನೇ ಕ್ಲಾಸ್ ಇರಬಹುದು. ನಾನು ಬರೆದುದ್ದನ್ನ ತೋರಿಸುವ, ಮೆಚ್ಚಿಸುವ, ಹೆಚ್ಚುಗಾರಿಕೆ, ಮತ್ತು ಹುಂಬುತನ ನನ್ನಲ್ಲಿತ್ತು. (ಕೆಲವರು ಇದಕ್ಕೆ ವಿನಯಶೀಲತೆ ಎನ್ನುತ್ತಾರೆ).

ಆಗ ನನಗೆ ನನ್ನ ಐದನೇ ಕ್ಲಾಸ್ ಓದಿದ ಕೆ.ಬೂದಿಯಾಳದ ನೆನಪಾಯಿತು. ನಮ್ಮ ತಾಯಿ ತವರು ಮನೆ ಬೇರೆ ಅದು. ಆ ಪುಸ್ತಕದ ಜೊತೆ ಹೋದೆ. ನನ್ನೊಳಗೆ “ನೀನು ಬರೆದ ಪುಸ್ತಕವನ್ನ ನಿಮ್ಮ ಮಾಸ್ತರ್‌ಗೆ ತೋರಿಸು, ಎಂಬ ತಿಳುವಳಿಕೆಯ ಗಂಟೆ ಬಾರಿಸಿದಂತಾಯಿತು”. ಕೂಡಲೇ ಜೋಪಾನವಾಗಿ ಆ ಪುಸ್ತಕವನ್ನು ಎತ್ತುಕೊಂಡು ನಾನು ಕಲಿತ ಶಾಲೆಗೆ ಹೋದೆ. ಇನ್ನೂ ಅಂದಿನ ಮಾಸ್ತರ್‌ಗಳು ಇದ್ದರು. ನನ್ನನ್ನ ಗುರ್‍ತು ಹಿಡಿಲಿಲ್ಲ. ಏಕೆಂದರೆ, ಆಗಲೇ ನಾನು ಸ್ವಯಂಘೋಷಿತ ಕವಿ ಎಂಬಂತೆ ಕಚ್ಚೆ ಪಂಚೆ, ಜುಬ್ಬ, ಟೋಪಿ ಹಾಕ್ಕೊಂಡಿದ್ದೆ. ನನ್ನನ್ನು ಕಂಡು ಬಾಲಕವಿ ಬರುತ್ತಿದ್ದಾನೆಂದು ಆಶ್ಚರ್‍ಯ ಪಟ್ಟಿರಬಹುದು. ಆಶ್ಚರ್ಯ ಪಡ್ಬೇಡ್ರಿ, ಸರ… ನಾನು ನಿಮ್ಮ ಹಳೆ ವಿದ್ಯಾರ್ಥಿ, ನಾನೀಗ ತಾಳಿಕೋಟೇಲಿ ಓತ್ತಿದೀನಿ ಮತ್ತೆ ಸಾಹಿತಿಯಾಗಿದೀನಿ ನೋಡ್ರಿ… ನಾನು ಬರೆದ “ಮೈಸೂರು ಮಲ್ಲಿಗೆ” ಪುಸ್ತಕ ಎಂದು ಹಸ್ತಾಕ್ಷರ ಪುಸ್ತಕವನ್ನು ಅವರ ಮುಂದಿಟ್ಟೆ. ಅವರಿಗೆ ಎಲ್ಲಿಲ್ಲದ ಗಾಭರಿ, ಆಶ್ಚರ್ಯ. ಏಕೆಂದರೆ, ನಾನು ದಡ್ಡ ಮತ್ತು ದೊಡ್ಡ ಶಿಖಾಮಣಿಯಾಗಿದ್ದೆ. ಸಾವರಿಸಿಕೊಂಡು “ಖರೇ ರೀ… ಸರ… ಈಗೆಲ್ಲಾ ಬದಲಾಗಿದೀನಿ. ಓದ್ರಿ”, ಎಂದು ಹೇಳಿದಾಗ, ಅವರೆಲ್ಲರೂ “ಬರ್ರೀ ಹಂಗಾದ್ರಾ ಕುಂಡ್ರ್‍ಈ…” ಎಂದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ನಿಧಾನನಾಗಿ ನಾನು ಬರೆದ ದುಂಡಾದ ಅಕ್ಷರ ಮತ್ತು ಸಾಹಿತ್ಯವನ್ನು ನೋಡಿ, ಗಾಬರಿಗೊಂಡು..

“ಏಯ್! ಬಾಳ ಛಲೋ ಕಾದಂಬ್ರೀನ ಬರ್ದಿರೀ ಬುಡ್ರೀ….” ಹಂಗಾರೆ ಚಾ… ಕುಡ್ರೇಲಾ… ಎಂದು ಕಿಟ್ಲಿಯಿಂದ ಚಾ ಬಗ್ಗಿಸಿ ನನ್ನ ಮುಂದೆ ಇಟ್ರು. ಅವರ ಮುಂದೆ ನಾನು ಬಡಾ ವ್ಯಕ್ತಿಯಂತೆ ಕಂಡಿರಬಹುದು. ಅಂತೂ ಎಲ್ಲರೂ ಹೊಗಳಿ ಹೊನ್ನಸೂಲಕ್ಕೇರಿಸಿಬಿಟ್ರು. “ಇವತ್ತು ನಮ್ಮಂತವ್ರನ್ನ ಏಣಿ ದಾಟಿದ ಮ್ಯಾಲೆ ಮರ್‍ತ್‍ಬಿಡ್ತಾರ್. ನೀವು ಮುಂದಕ್ಕೋಗಿ ನಮ್ಮನ್ ಮರೀದೆ ಸಾಹಿತಿಯಾಗಿ ಬಂದಿದ್ದೀರಿ ಅದ್ಕ ಮಾಸ್ತ್ ಆನಂದಾಗ್ಯಾದ ನೋಡ್ರಿ”, ಎಂದು ಜೋಬಿನಲ್ಲಿ ಕೈ ಹಾಕಿದವರೇ, ಐದು ರೂಪಾಯಿ ತೆಗೆದು ನಮ್ಗೆ ಕೂಡೋ ಶಕ್ತಿ ಇಷ್ಟೇರೀ ತಗೋಳ್ರ್‍ಇ ಎಂದು ಹೇಳಿದಾಗ ನನಗೆಲ್ಲಿಲ್ಲದ ಖುಷಿಯೋ ಖುಷಿ. ಆನಂದವೋ ಆನಂದ. ಯಾಕಂದ್ರೆ ಅಂತಹ ಐದು ರೂಪಾಯಿ ನನ್ನ ಜೀವಮಾನದಲ್ಲಿ ನೋಡಿದ್ದಿಲ್ಲ. ಇವತ್ತು ನೋಡ್‍ದಂಗಾಯ್ತು ಎಂದು ಜೋಬಿಗೆ ಇಟ್‍ಕೊಂಡ್ ನಮಸ್ಕರಿಸಿದೆ. ನಂತರ ಅವರಿಂದ ಬೀಳ್ಕೊಂಡು ನಮ್ಮೂರಿಗೆ ತೆಲುಪಿದೆ. ಅಂದಿನಿಂದಲೇ ಸಾಹಿತಿ ಎಂಬ ಶಹಭಾಷ್‍ಗಿರಿ ಪಡೆದುಕೊಂಡ ನಾನು ಇಂದು ಖರೇ ಸಾಹಿತಿಯಾಗಿ, ಹಳೇ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟಿದ್ದೇನೆ. ಕ್ಷಮೆ ಇರಲಿ…..
*****

ಜೀವನದ ಸ್ಥಿತ್ಯಂತರಗಳ, ಮೌಲ್ಯ ಮಾಪನಗಳನ್ನು, ಅನುಭವಗಳು ವೈಭವೀಕರಿಸುತ್ತವೆ. ಆವೈಭವೀಕರಣದಲ್ಲಿ ವಾಸ್ತವಿಕತೆಗೆ ಹೆಚ್ಚು ಒತ್ತು ನೀಡಿದರೆ, ಅವೇ ಸತ್ಯವೆನಿಸುತ್ತವೆ.

ತಾನಿಲ್ಲದ ಬದುಕಿನಲ್ಲಿ ನೆನಪುಗಳು ಇರುವುದಿಲ್ಲ. ಇಲ್ಲದ ನೆನಪುಗಳ ಹುಡುಕಾಟಕ್ಕಾಗಿ ಅನುಭವಗಳನ್ನು ಸೃಷ್ಟಿ ಮಾಡಿದರೆ ಅದು ಚೋದ್ಯವಾಗುತ್ತದೆ…!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದು?
Next post ನಿಕರಾಗುವಾ: ಪಾಪಬೋಧೆ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys